ಶಬರಿ

ಸುಮಾರು ೫ ವರ್ಷಗಳ ಹಿಂದೆ, ಶ್ರೀಮತಿ ಭ್ರಮರಿ ಶಿವಪ್ರಕಾಶ್ ಅವರ ನೃತ್ಯ ಪ್ರದರ್ಶನದಿಂದ ಪ್ರಭಾವಿತನಾಗಿ, ಬರೆದ ಒಂದು ನೀಳ್ಗವನ – ಶಬರಿ. ಅಂದಿನಿಂದ ಇಂದಿನವರೆವಿಗೂ ನನ್ನಿಂದ ಇಂತಹ ಮತ್ತೊಂದು ಕವನದ ರಚನೆ ಸಾಧ್ಯವೆ ಎಂದು ಹಲವಾರು ಬಾರಿ ಮನಸ್ಸು ಯೋಚಿಸಿದ್ದುಂಟು. ಇದೂವರೆವಿಗೂ ಸಾಧ್ಯವಾಗಿಲ್ಲವೆಂಬುದು ಸತ್ಯ. ಮುಂದಿನ ದಿನಗಳಲ್ಲಿ ಭಗವತ್ಕೃಪೆಯಿಂದ ಸರಿಯಾದ ಸ್ಫೂರ್ತಿ ಬಂದೊದಗಿ ಮತ್ತೊಮ್ಮೆ ಇಂತಹ ಕವನ ರಚನೆಯಾಗಲಿ ಎನ್ನುವುದು ಒಂದು ಆಶಯ…..

ಶಬರಿ

ಅಂಕ – ೧

ದಟ್ಟ ಕಾನನದ ಹಸಿರ ಒಡಲಲಿ
ನಲಿದು ಹರಿಯುವ ತುಂಗೆ ದಡದಲಿ
ಮನದಿ ಬೆಳಗುವ ಭಕುತಿ ಬೆಳಕಲಿ
ಹೊಳೆವೆ ಆತ್ಮನ ಧರಿಸಿ ಶಬರಿಯು
ಕಾಯುತಿರುವಳು ರಾಮ ತಾ ಬರುವ ಹಾದಿಲಿ ೧

ದೇಹ ಬಾಗಿದೆ ಕಣ್ಣು ಮಂಜಿದೆ
ಸುಕ್ಕು ಮುತ್ತಿದ ತೊಗಲು ಹೊದ್ದಿದೆ
ಅಮಿತ ಆಶೆಯು ಮನದಿ ಹರಿದಿದೆ
“ಎನ್ನ ರಾಮನು, ಎನ್ನ ದೇವನು, ನಿಜದಿ ಬರುವನು!
ಎನ್ನ ಕಾಣ್ವನು ಎನ್ನ ಕಾಯ್ವನು ಸಕಲ ಸದ್ಗುಣಧಾಮನು” ೨

ದಿನವು ಉದಯಿಪ ರವಿಯ ನೋಡುತ
ಬರುವನೆನ್ನಯ ರಾಮನೆನ್ನುತ
ತನ್ನ ನಿತ್ಯದ ಕರ್ಮ ಗೈವಳು
ಬಿದ್ದ ಹಣ್ಗಳ ಆಯ್ದು ತಿಂಬಳು
ಬಿದ್ದ ಹೂಗಳ ಹಾರ ನೇಯ್ವಳು ೩

ಭರದಿ ಸೂರ್ಯನು ರಥವನೋಯ್ದು
ಮುಳುಗೆ ರುಧಿರದ ಹೊದಿಕೆ ನೇಯ್ದು
ಹರಿಸಿ ಕಂಗಳ ಅಶ್ರುಧಾರೆಯ
ಕೂಗಿ ಕರೆವಳು “ರಾಮ ಬಾರೆಯ?
ಮೊಗವ ತೋರೆಯ? ನಿನ್ನ ಸೇವೆಯ ಭಾಗ್ಯ ನೀಡೆಯ? ೪

ಇಂಥ ನಿರ್ಮಲ ಭಕ್ತಿ ಸೆಳೆತವ
ನೋಡಿ ನಲಿಯಲು ಬಂದ ರಾಘವ
ಕಳೆದ ಸೀತೆಯ ಹುಡುಕೊ ನೆಪದಲಿ
ಬಂದ ದೇವನು ಶಬರಿ ಬಳಿಯಲಿ
ಭಕ್ತಿ ಸುಲಭನು ಪಾತ್ರನಾದನು ಭಕ್ತಳಾ ನಿಜ ಲೀಲೆಲಿ ೫

(ಸುರರು ಮುನಿಗಳು ಹುಡುಕಿ
ಅಲೆಯಲು ಕಾಣದಾ ನಿಜ ಮುಕ್ತಿಯು
ಇಂದು ಬಂದಿದೆ ಶಬರಿ ದ್ವಾರಕೆ
ತೋರೆ ಸುಕೃತದ ಶಕ್ತಿಯು )

ಅಂಕ – ೨

ತನ್ನ ದ್ವಾರಕೆ ಬಂದ ರಾಮನ ಕಂಡಳಾಗ ಶಬರಿಯು
“ಬಾರೊ ಕಂದನೆ! ಎನಿತು ಕರೆವಳು ನಿನ್ನನು ನಿನ್ನ ಅಮ್ಮೆಯು?”
ಆಗ ನುಡಿದನು ಶೇಷ ರೂಪನು ತನ್ನ ಅಣ್ಣನ ಗುಣವನು
“ಕೇಳು ತಾಯೆ, ಎನ್ನ ಅಗ್ರಜನೀತ ರಘುಕುಲ ಸೋಮನು”
“ಎನ್ನ ನಾಮವು ಲಕ್ಷ್ಮಣನೆಂಬರು ನಾನೆ ಈತನ ತಮ್ಮನು” ೬

ಆಹಾ! ಆಹಾ! ಏನಿದೇನಿದು ಇಂಥ ಸೊಗಸಿನ ಅಚ್ಚರಿ
ಶುದ್ಧ ಭಕ್ತಿಗೆ ರಾಮ ಸೇವೆಯು ಲಭಿಸಿದಂತಹ ವೈಖರಿ
ನಾಮ ಕೇಳಿಯೆ ಮಾತು ಹೊರಡದೆ ಅಲ್ಲಿ ಶಬರಿಯು ನಿಂತಳು
ವೇದ ಶಾಸ್ತ್ರಕೆ ಕಾಣದೊಡೆಯನ ಕಣ್ಣ ಮುಂದೆಯೆ ಕಂಡಳು
ಭಕ್ತಿ ಪ್ರೀತಿಯ ಭಾವ ಲಹರಿಲಿ ಆಗ ತಾನು ಮಿಂದಳು ೭

“ಏಕೆ ಅಲ್ಲಿಯೆ ನಿಂತೆ ತಾಯೆ? ಬಾರೆ ಎನ್ನೆಯ ಬಳಿಯಲಿ”
ಎಂದು ರಾಮನು ಕೈಯ ಚಾಚಿದ ಶಬರಿ ಎಡೆಯಲಿ ಪ್ರೀತಿಲಿ
ಊರುಗೋಲನು ಬಿಸುಟು ವೃದ್ಧೆಯು ಆಗ ರಾಮನ ಸೇರಲು
ದೇವದೇವರು ಬಂದು ನಿಂತರು ಇಂಥ ದೃಶ್ಯವ ಕಾಣಲು
ದೇವ ಭಕುತಳ ಯೋಗಮಿಲನದ ಪುಣ್ಯ ಭಾವದಿ ಮೀಯಲು ೮

“ಅಮಿತ ಕಾಲದ ತಪಕೆ ಫಲವನೀವ ಕಾಲವು ಬಂದಿದೆ.
ಕೇಳು ತಾಯೆ ಎಲ್ಲ ಕೊಡುವೆನು ನಿನ್ನ ಮನದೊಳಗೇನಿದೆ?”
ತಾಯಿ ಭಾವವು ಮೂಡಿ ಬಂದಿದೆ ಮೊದಲ ನೋಟದೆ ಮನದಲಿ
ದೇವನೀತಗೆ ಏನ ನೀಡಲಿ ಎಂಬ ದೈನ್ಯತೆ ಜೊತೆಯಲಿ
ದ್ವಂದ್ವ ಭಾವವು ಮೂಡಿ ಹರಿಯಿತು, ಹನಿಯು ಗೂಡಿತು ಕಣ್ಣಲಿ ೯

ಎಲ್ಲ ಅರಿತ ರಾಮಚಂದ್ರನು ಆಗ ಶಬರಿಗೆ ಪೇಳ್ದನು
“ಅಮ್ಮ ನನಗೆ ಹಸಿವೆಯಾಗಿದೆ ನೀಡಲಾರೆಯ ಏನನೂ?”
ಮಾತ ಕೇಳುತ ಮಗುವಿನಂದದಿ ಶಬರಿ ತಾನು ನಲಿದಳು
“ಈಗ ಬರುವೆನು ತಾಳು ಕಂದನೆ” ಎಂದು ರಾಮಗೆ ಪೇಳ್ದಳು
ಜಗವನುಣಿಸುವ ಕಲ್ಪತರುವನು ಉಣಿಸಲೋಸುಗ ಪೋದಳು ೧೦

“ಕೇಳಿ ತರುಗಳೆ ಒಂದು ಬಿನ್ನಪ ಎನ್ನ ದೇವನು ಬಂದಿಹ
ತನ್ನ ಸೇವೆಯ ಗೈವ ಭಾಗ್ಯವ ಇಂದು ಎಮಗೆ ತಂದಿಹ
ಹಸಿದ ರಾಮನ ತಣಿಸಲೋಸುಗ ನೀಡಿ ನಿಮ್ಮೆಯ ಫಲಗಳ
ಪ್ರೀತಿಯಿಂದಲಿ ಇಂತು ಶಬರಿಯು ಕೇಳೆ ಎಲ್ಲ ಮರಗಳ
ಹಣ್ಣ ರಾಶಿಯೆ ಧರೆಗೆ ಇಳಿಯಿತು ಸೇರೆ ರಾಮನ ಕೈಗಳ ೧೧

ತನ್ನ ಸೆರಗಲಿ ಅವನು ತುಂಬುತ ವೃದ್ಧೆ ಶಬರಿಯು ನಲಿದಳು
“ಇಗೋ ದೇವನೆ ಹಣ್ಣ ತಂದೆನು” ಎಂದು ಓಡುತ ಬಂದಳು
ಹಣ್ಣ ರಾಶಿಯ ಕೆಳಗೆ ಸುರಿಯೆ ರಾಮನೊಡ್ಡಲು ಕೈಯನು
“ತಾಳು ರಾಮನೆ! ಏನಿದಾತುರ? ನೋಡ ಬಾರದೆ ಫಲವನು?
ರುಚಿಯದಾವುದು? ಪುಳಿಯದಾವುದು? ತಿಳಿದು ತಿನ್ನು ಹಣ್ಣನು!” ೧೨

ಹಣ್ಣನೊಂದನು ಒರೆಸಿ ರುಚಿಯ ನೋಡೆ ಅದನು ತಿಂದಳು
“ಅಯ್ಯೊ ರಾಮ ಕಹಿ” ಇದೆಂದು ನೀಡಲಾಗದೆ ಬಿಸುಟಳು
ಮತ್ತೆ ಬೇರೆಯ ಹಣ್ಣು ತೆಗೆದು ರುಚಿಸಿ ಚೆನ್ನಿದು ಎನ್ನುತ
ತನ್ನ ಎಂಜಿಲು ಎಂದು ಕಾಣದೆ, ನೀಡೆ “ತಿನ್ನಿದು” ಎನ್ನುತ
ಭಕ್ತವತ್ಸಲ ಮುದದಿ ತಿಂದನು ಮುಗ್ಧ ಭಕ್ತಿಗೆ ಮೆಚ್ಚುತ ೧೩

ಎನಿತು ಸಂತಸ ಜಗವ ತುಂಬಿತು ಸೃಷ್ಟಿ ಚಂದದಿ ನಲಿದಿದೆ
ರಾಮನಿತ್ತಲಿ ಹಣ್ಣ ತಿನ್ನಲು ಜಗದ ಹಸಿವೆಯೆ ಇಂಗಿದೆ!
ಎಂಥ ಪುಣ್ಯದ ಸೊಗಸಿದೆಂದು ಹೇಳೆ ಪದಗಳು ಸಾಲದು
ಬ್ರಹ್ಮ ಇಂದ್ರರೆ ತಪವ ಗೈದರು ಇಂಥ ಭಾಗ್ಯವು ದೊರಕದು
ಕಾಮವಿಲ್ಲದ ಭಕುತಿ ಲಹರಿಯ ಮಹಿಮೆ ಎಂತಹ ಚೆನ್ನದು! ೧೪

ಇನಿತು ಸೇವೆಯ ಪಡೆದ ರಾಮನು “ಕೇಳು ತಾಯೆ ಕಥೆಯನು
ಕಪಟಿ ರಾವಣ ಎನ್ನ ಸೀತೆಯ ಕದ್ದು ಲಂಕೆಗೆ ಒಯ್ದನು!
ಎನಿತು ಅರಸಲಿ ಎನ್ನ ಮಡದಿಯ? ಎನಿತು ಆಕೆಯ ಸೇರುವೆ?”
ಎಂದು ಕೊರಗಿದ ಪ್ರಭುವ ಕಂಡು “ಏಕೆ ಕಂದನೆ ಮರುಗುವೆ?
ಪೋಗು ಪಂಪೆಯ ಮಡಿಲಿನಲ್ಲಿ ಅಲ್ಲಿ ಕಪಿಗಳ ಕಾಣುವೆ ೧೫

“ಅವರ ಸೇರೆ ಸೈನ್ಯ ಕಟ್ಟಿ ಪೋಗು ಸಾಗರ ತೀರಕೆ
ಅದನು ಮೀರೆ ಬಂದು ಸೇರುವೆ ಸ್ವರ್ಣ ನಗರಿಯ ದ್ವಾರಕೆ”
ಇಂತು ರಾಮಗೆ ಯುಕ್ತಿ ಪೇಳುತ ಶಬರಿ ಹಣ್ಗಳನಿತ್ತಳು
ರಾಮ ಸಂತಸದಿಂದೆಲ್ಲವ ತಿನ್ನೆ ಬೆಚ್ಚುತಳೆದ್ದಳು
“ನನ್ನ ಕಣ್ಣೆ ತಗುಲಿತೆನ್ನುತ ದೃಷ್ಟಿಯ ತೆಗೆದಳು ೧೬

ಅಮಿತ ಭಕ್ತಿಯ ಕಂಡ ರಾಮನನುಜ ಕಂಬನಿ ಮಿಡಿದನು
“ಆಹ! ತಾಯೆ! ಇಂದಿಗೆನ್ನೆಯ ಗರ್ವವಿಂಗಿದೆ” ಎಂದನು
“ಎನ್ನ ಭಕುತಿಯೆ ಸರ್ವ ಶ್ರೇಷ್ಠವು ಎಂಬ ಭಾವದಿ ಬೀಗಿದೆ
ದಿಟವದಾವುದು ಸಟೆಯದಾವುದು ಎಂದು ನೀನು ತೋರಿದೆ
ತಿಮಿರ ತುಂಬಿದ ಮನದೊಳಿಂದು ಭಕ್ತಿ ಜ್ಯೋತಿಯ ಬೆಳಗಿದೆ ೧೭

ದೇವ ವರದನು ಪಿಡಿದು ಶಬರಿಯನೆತ್ತಿ ಶಿರವನು ಸವರುತ
“ಹೇಳು ತಾಯೆ ಇನ್ನು ಇಹುದೆ ನಿನ್ನ ಮನದೊಳು ಇಂಗಿತ?
ಸಪ್ತ ಲೋಕವ ತಂದು ನಿನ್ನೆಯ ಪಾದತಳದಲಿ ಹಾಕುವೆ
ದೇವದೇವರ ಸಿರಿಯೆ ಶಚಿಯರ ಕೈಲಿ ಸೇವೆಯ ಗೈಸುವೆ
ಅಖಿಲ ಪುಣ್ಯವ ಸಕಲ ಭಾಗ್ಯವ ನಿನ್ನ ಮಡಿಲಲಿ ಇರಿಸುವೆ ೧೮

ಇಂತು ರಾಘವ ನುಡಿಯೆ ಶಬರಿಯು ನಗುತ ತಲೆಯನು ಆಡಿಸಿ
“ಪುಟ್ಟಿ ಬಂದಿಹುದೆನ್ನ ದೇಹವು ಎನಿತು ಜನುಮವ ಸವೆಯಿಸಿ
ಇನ್ನು ಎನ್ನೊಳು ಮೋಹವಿಹುದೊ ಎಂದು ಕಾಣ್ಬೆಯ ಪರಕಿಸಿ?
ಏಕೆ ಎನ್ನೊಳಗಿಂತು ಕೋಪವು ತೋರಬಾರದೆ ದಯೆಯನು?
ದೇವದೇವನೆ ಸಾಕು ಭವವು ನೀಡು ಮುಕುತಿ ಪದವನು ೧೯

ಅಂಕ – ೩

ನುಡಿಯ ಕೇಳುತ ದಿವಿಜರೊಡೆಯನು ಮನದೆ ಸಂತಸಗೊಂಡನು
ಭಕ್ತಳಿಂಥವಳನ್ನು ಪಡೆದಿಹ ನಾನೆ ಎಂತಹ ಧನ್ಯನು!
ದೈನ್ಯ ಭಾವದೆ ಶಬರಿ ಬಾಗುತ ರಾಮ ಪಾದವ ಪಿಡಿದಳು
ಅಶ್ರುಧಾರೆಯ ಪುಣ್ಯ ಜಲದಲಿ ಹರಿಯ ಚರಣವ ತೊಳೆದಳು
ವಿಶ್ವ ಮೋಹನ ಸತ್ಯ ಸುಂದರ ದಿವ್ಯ ದರ್ಶನ ಪಡೆದಳು ೨೦

ನೋಡ ನೋಡುತ ರಾಮ ದೇಹವು ನೀಲಿ ಆಗಸ ಮುಟ್ಟಿದೆ
ಭುವನವೆಲ್ಲವು ಸಕಲ ಸೃಷ್ಟಿಯು ಹರಿಯ ದೇಹದಿ ಕಂಡಿದೆ
ಶಂಖ ಚಕ್ರವ ಗದೆ ಪದ್ಮವ ಧರಿಸಿದಂತಹ ರೂಪವು
ರವಿಯು ಸಾಸಿರ ಉದಿಸಿಬಂದಿರುವಂಥದೆಂತಹ ದಿವ್ಯವು
ಎಲ್ಲ ದೇವರು ಅಲ್ಲಿ ಸೇರಿರೆ ಹಿಂದೆ ಇಹನಲ ಶೇಷನು ೨೧

ಎಂಥ ಅನುಪಮ ಎಂಥ ಮೋಹಕ ನೀಲ ವರ್ಣದ ದೇಹವು
ಪೂರ್ಣ ಚಂದ್ರಮನಂತೆ ಬೆಳಗುತ ತಂಪನೆರೆಯುವ ತೇಜವು
ಕಮಲ ವದನವು ಮಿನುಗೊ ಕೌಸ್ತುಭ ಜೊತೆಯೊಳಭಯ ಹಸ್ತವು
ನೀಲ ದೇಹದ ಉಡುಗೆ ತೊಡುಗೆಯು ಮಿನುಗೊ ಪೀತದ ವರ್ಣವು
ಪರಮ ಪದದ ರೂಪ ಕಾಣುತ ಶಬರಿ ಕಂಗಳು ತಣಿದವು ೨೨

ತನ್ನ ಶಿರವನು ಪಾದತಳದಲಿ ಇಟ್ಟು ಕಂಬನಿ ಮಿಡಿಯುತ
“ಎಷ್ಟು ಕರುಣೆಯು ದೀನ ಬಂಧುವೆ ನಿನಗೆ ಎನ್ನೊಳು” ಎನ್ನುತ
“ಇಂದಿಗೆನ್ನೆಯ ಜನುಮ ಸಾರ್ಥಕ ಇಂದು ತಪವು ಫಲಿಸಿತು
ವೇದ ಓದದೆ, ಶಾಸ್ತ್ರ ಪೇಳದೆ, ನಿನ್ನ ದರುಶನ ಲಭಿಸಿತು
ರಾಮ ನಾಮದ ಮಹಿಮೆ ಎಂಥದು ಎಂದು ಲೋಕವೆ ಕಂಡಿತು”೨೩

ನಭೆಯು ಪ್ರಭೆಯಲಿ ಬೆಳಗಿ ತೊಳಗಲು ದಿವ್ಯ ಘೋಷವು ಮೊಳಗಿತು
ಪ್ರಾಣ ಜ್ಯೋತಿಯು ದೇಹ ತೊರೆದು ಹರಿಯೊಳೈಕ್ಯವದಾಯಿತು
ಸುರರು ಮುನಿಗಳು ಸಕಲ ದಿವಿಜರು ಪುಷ್ಪ ವೃಷ್ಟಿಯ ಕರೆಯಲು
ಶಬರಿ ದೇಹವೆ ಕರ್ಪೂರವಾಯಿತು ರಾಮಗಾರತಿ ಬೆಳಗಲು
ಇಂತು ಪೇಳ್ವೆನು ಶಬರಿ ಕಥೆಯನು ಭಕುತಿ ಮಹಿಮೆಯ ಸಾರಲು ೨೪

ಮಂತ್ರಕೊಲಿಯನು ತಂತ್ರಕೊಲಿಯನು ದೇವ ಭಕುತಿಗೆ ಸುಲಭನು
ಪ್ರೀತಿಯಿಂದಲಿ ಒಮ್ಮೆ ಕರೆದರೆ ರಾಮನೋಡುತ ಬರುವನು
ಹರಿಯೆ ಎನ್ನೊಳಗಿಂತು ಕುಳಿತು ಕಥೆಯ ಬರೆಸಿಹ ಕರದಲಿ
ಯಾರೆ ಪಾಡಲಿ ಯಾರೆ ಕೇಳಲಿ ರಾಮರಕ್ಷೆಯು ದೊರಕಲಿ
ಭುವನಕೆಲ್ಲಕೆ ಶಾಂತಿ ಸೌಖ್ಯವು ಅಖಿಲ ಸುಕೃತವು ಲಭಿಸಲಿ ೨೫

————–ಶ್ರೀ ರಾಮಕೃಷ್ಣಾರ್ಪಣಮಸ್ತು—————-

7 comments

Skip to comment form

  • Shreenidhi on July 1, 2011 at 4:16 PM
  • Reply

  ultimate

  1. dhanyavaadagalu 🙂

  • Shantala on February 21, 2012 at 7:19 AM
  • Reply

  Dear Praveen,
  I congratulate you from bottom of my heart for this MIND BLOWING presentation of “SHABARI”.
  It is a unique composition.I have heard Shabari’s story since childhood days but as i went through the stanzas I felt as if knowing Shabari for the first time.The usage of language is so beautiful that anyone can understand.It is a delight to the soul.
  May God Shower you with all his” BLESSINGS”.
  Regards
  Shantala.

  • Shantala on February 21, 2012 at 7:34 AM
  • Reply

  Dear Praveen,
  I congratulate you from bottom of my heart for MIND BLOWING presentation of “SHABARI”.i have read Shabari from childhood days but as i went through the stanzas felt as if knowing Shabari for the first time.It is a delight to the soul.The usage of language is so simple that anybody can understand.
  May GOD shower you with all his BLESSINGS.
  Regards
  Shantala

  • Vinayaka on March 17, 2014 at 8:25 PM
  • Reply

  ಅಬ್ಬಾ..!! ಎಷ್ಟು ಚೆನ್ನಾಗಿದೆ ಪ್ರವೀಣ್.. ನಿಜವಾಗ್ಲೂ ಓದಿ ಮನಸ್ಸಿಗೆ ತುಂಬಾ ಖುಷಿಯಾಯ್ತು… ತುಂಬಾ ಥ್ಯಾಂಕ್ಸ್

  • Shruthi on October 19, 2020 at 11:20 AM
  • Reply

  Very good one Praveen avare

 1. Thanks Dr. Shantala, Vinny and Shruti avare! Really delighted that it resonated with each one of you! 🙂

Leave a Reply

Your email address will not be published.

Time limit is exhausted. Please reload CAPTCHA.

This site uses Akismet to reduce spam. Learn how your comment data is processed.